ಬಿಸಿಲು, ಗಾಳಿ, ಮಳೆಗೂ ಜಗ್ಗದ ಬದುಕು…!ಇಂದು ಈ ಊರು… ನಾಳೆ ಮತ್ತೊಂದು ಊರು; ಕುರಿಗಳ ಹಿಂಡಿನೊಂದಿಗೆ ಊರೂರು ಅಲೆದಾಡುವ ಕುರಿಗಾಹಿಗಳ ಕುಟುಂಬ

ಒಂದು ಊರು ಇವರ ಶಾಶ್ವತ ನೆಲೆಯಲ್ಲ… ಒಂದು ಮನೆಯ ಗೋಡೆ ಇವರಿಗೆ ಆಸರೆಯಲ್ಲ… ಕುರಿಗಳ ಹಿಂಡಿನ ಹೆಜ್ಜೆಯೊಂದಿಗೆ ಊರೂರು ಅಲೆದಾಡುತ್ತಾ ಜೀವನ ಸಾಗಿಸುವ ಕುರಿಗಾಹಿಗಳ ಬದುಕು ನಿಜಕ್ಕೂ ಕಷ್ಟದ ಹಾದಿಯಾಗಿದೆ. ಇಂದು ಈ ಊರಿನಲ್ಲಿ ಬೀಡು ಬಿಟ್ಟರೆ, ನಾಳೆ ಕುರಿಗಳಿಗೆ ಮೇವು ಸಿಗುವ ಮತ್ತೊಂದು ಊರಿನತ್ತ ಹೆಜ್ಜೆ ಹಾಕಬೇಕು. ಬಿಸಿಲು, ಗಾಳಿ, ಮಳೆ, ಸಿಡಿಲು ಯಾವುದಕ್ಕೂ ಜಗ್ಗದೆ ಕರ್ನಾಟಕ–ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಅಲೆದಾಡುತ್ತಾ ಬದುಕು ಕಟ್ಟಿಕೊಳ್ಳುತ್ತಾರೆ.

ಕುರಿಗಳಿಗೆ ಹಸಿರು ಮೇವು ಸಿಗುವ ಜಾಗವೇ ಇವರಿಗೆ ನೆಲೆ. ಬಯಲಿನಲ್ಲೇ ಚಿಕ್ಕದೊಂದು ಟೆಂಟ್ ಹಾಕಿಕೊಂಡು ಅದನ್ನೇ ಮನೆ ಮಾಡಿಕೊಂಡು ದಿನಗಳನ್ನು ಕಳೆಯುತ್ತಾರೆ. ಬೆಳಗಾಗುತ್ತಿದ್ದಂತೆ ಪುರುಷರು ಕುರಿಗಳ ಹಿಂಡನ್ನು ಕರೆದುಕೊಂಡು ಮೇವು ಹುಡುಕುತ್ತಾ ಹೊರಟರೆ, ಮಹಿಳೆಯರು ಕುಟುಂಬಕ್ಕೆ ಬೇಕಾದ ನೀರು ಮತ್ತು ಅಡುಗೆಗೆ ಬೇಕಾದ ಕಟ್ಟಿಗೆಗಾಗಿ ಸ್ಥಳೀಯರ ಬೋರ್‌ವೆಲ್, ಬಾವಿಗಳತ್ತ ಸಾಗುತ್ತಾರೆ.

ತಲೆ ಮೇಲೆ ಉರಿಯುವ ಬಿಸಿಲಿರಲಿ, ಮೈಮೇಲೆ ಸುರಿಯುವ ಮಳೆಯಿರಲಿ, ಆಕಾಶದಲ್ಲಿ ಸಿಡಿಲು-ಗುಡುಗು ಅಬ್ಬರಿಸಲಿ… ತಾವು ಸಾಕಿದ ಕುರಿಗಳ ಹಿಂಡಿನ ಜವಾಬ್ದಾರಿಯನ್ನು ಹೊತ್ತು ದಿನವಿಡೀ ಅಲೆದಾಡುವುದೇ ಇವರ ಬದುಕು. ಸಂಜೆ ಮರಳಿದ ಬಳಿಕವೂ ವಿಶ್ರಾಂತಿ ಎಂಬುದು ಅಪರೂಪ. ಮೂರು ಕಲ್ಲುಗಳನ್ನು ಒಲೆ ಮಾಡಿಕೊಂಡು, ಅದರ ಮೇಲೆ ಪಾತ್ರೆ ಇಟ್ಟು ಅಡುಗೆ ಮಾಡಿ, ಮೇಣದಬತ್ತಿಯ ಮಂದ ಬೆಳಕಿನಲ್ಲಿ ಅದೇ ಚಿಕ್ಕ ಟೆಂಟ್‌ನಲ್ಲಿ ಕುಟುಂಬದವರೆಲ್ಲರೂ ಕುಳಿತು ಊಟ ಮಾಡುತ್ತಾರೆ.

ಆದರೆ ಈ ಬದುಕಿನಲ್ಲಿರುವ ದೊಡ್ಡ ತ್ಯಾಗ ಮಕ್ಕಳದ್ದು. ಕುರಿಗಾಹಿಗಳಲ್ಲಿ ಕೆಲವರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಾರದೆಂದು ಮಕ್ಕಳನ್ನು ತವರುಮನೆ ಅಥವಾ ಮನೆಯ ಹಿರಿಯರ ಬಳಿ ಬಿಟ್ಟು, ತಾವು ಮಾತ್ರ ಕುರಿಗಳೊಂದಿಗೆ ಊರೂರು ಅಲೆದಾಡುತ್ತಾರೆ. ಮಕ್ಕಳ ಕೈಯಲ್ಲಿ ಪುಸ್ತಕವಿರಲಿ, ತಮ್ಮ ಬದುಕು ಎಷ್ಟೇ ಕಷ್ಟವಾಗಲಿ ಎಂಬ ಆಶಯದೊಂದಿಗೆ ದೂರವಿದ್ದು ದುಡಿಯುತ್ತಾರೆ.

ವರದಿ : ಲಕ್ಷ್ಮಣ ಮೂಕಿ 

Comments