ಸಿಂಧೂರ ಗ್ರಾಮದಲ್ಲಿ ವೀರ ಸಿಂಧೂರ ಲಕ್ಷ್ಮಣ ಜಯಂತಿ ಸಂಭ್ರಮ

ಜತ್ತ - ಸಿಂಧೂರ: ಕರ್ನಾಟಕ–ಮಹಾರಾಷ್ಟ್ರ ಗಡಿಭಾಗದ ಹೆಮ್ಮೆಯ ವೀರಪುತ್ರ, “ಕರ್ನಾಟಕದ ರಾಬಿನ್ ಹುಡ್” ಎಂದೇ ಖ್ಯಾತರಾಗಿದ್ದ ವೀರ ಸಿಂಧೂರ ಲಕ್ಷ್ಮಣ ಅವರ ಜಯಂತಿಯನ್ನು ಇಂದು ಸಿಂಧೂರ ಗ್ರಾಮದಲ್ಲಿ ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.

೧೮೯೮ರ ಮೇ ೧೮ರಂದು ಜನಿಸಿದ ವೀರ ಸಿಂಧೂರ ಲಕ್ಷ್ಮಣ ಅವರು ಬ್ರಿಟಿಷರ ದಬ್ಬಾಳಿಕೆ, ಶ್ರೀಮಂತರ ಅನ್ಯಾಯ ಹಾಗೂ ಬಡವರ ಮೇಲಿನ ಶೋಷಣೆಯ ವಿರುದ್ಧ ತಮ್ಮದೇ ಆದ ಹೋರಾಟ ನಡೆಸಿದ ಅಪರೂಪದ ಕ್ರಾಂತಿಕಾರಿ ಹೋರಾಟಗಾರರಾಗಿದ್ದರು. ಬಡವರ ನೋವಿಗೆ ಸ್ಪಂದಿಸಿದ ಅವರು, ಶ್ರೀಮಂತರಿಂದ ದೋಚಿದ ಹಣ ಮತ್ತು ಆಸ್ತಿಯನ್ನು ಬಡವರಿಗೆ ಹಂಚಿ ಜನಮನದಲ್ಲಿ ದೇವರ ಸ್ಥಾನ ಪಡೆದಿದ್ದರು.

ಇಂದಿಗೂ ಸಿಂಧೂರ ಗ್ರಾಮದ ಮಧ್ಯಭಾಗದಲ್ಲಿ ನಿರ್ಮಿಸಲಾಗಿರುವ ವೀರ ಸಿಂಧೂರ ಲಕ್ಷ್ಮಣ ಅವರ ಪುತ್ತಳಿ ಗಡಿಭಾಗದ ಜನರ ಹೆಮ್ಮೆಯ ಪ್ರತೀಕವಾಗಿ ನಿಂತಿದೆ. ಅವರ ಸಾಹಸ, ಧೈರ್ಯ ಮತ್ತು ಜನಪರ ಹೋರಾಟದ ನೆನಪನ್ನು ಸಾರುವ ಈ ಪುತ್ತಳಿ ಯುವಕರಿಗೆ ಸ್ಪೂರ್ತಿಯ ಕೇಂದ್ರವಾಗಿದೆ. ಜಯಂತಿ ಅಂಗವಾಗಿ ಗ್ರಾಮದ ಜನರು, ಅಭಿಮಾನಿಗಳು ಹಾಗೂ ಯುವಕರು ಪುತ್ತಳಿಗೆ ಹಾರ ಹಾಕಿ ಪುಷ್ಪನಮನ ಸಲ್ಲಿಸಿದರು. “ವೀರ ಸಿಂಧೂರ ಲಕ್ಷ್ಮಣ ಅಮರರಾಗಲಿ” ಎಂಬ ಘೋಷಣೆಗಳು ಗ್ರಾಮದಲ್ಲಿ ಮೊಳಗಿದವು.

ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರು, ಹಿರಿಯರು, ಯುವಕರು ಹಾಗೂ ವೀರ ಸಿಂಧೂರ ಲಕ್ಷ್ಮಣ ಅವರ ಕುಟುಂಬಸ್ಥರು ಉಪಸ್ಥಿತರಿದ್ದು, ಅವರ ಜೀವನ ಸಾಧನೆ ಮತ್ತು ಬಡವರ ಪರ ಹೋರಾಟವನ್ನು ಸ್ಮರಿಸಿದರು.

೧೯೨೨ರ ಜುಲೈ ೧೫ರಂದು ಅವರು ವೀರ ಮರಣ ಹೊಂದಿದರೂ, ಅವರ ಸಾಹಸ, ತ್ಯಾಗ ಮತ್ತು ಬಡವರ ಮೇಲಿನ ಕಾಳಜಿ ಇಂದಿಗೂ ಜನಮನದಲ್ಲಿ ಅಜರಾಮರವಾಗಿದೆ.

ವರದಿ ಲಕ್ಷ್ಮಣ ಮೂಕಿ,8618861316
UK FAST KANNADA NEWS 

Comments