ಜತ್ತ : ಸಿಂಧೂರ ಗ್ರಾಮದ ಕ್ರಾಂತಿವೀರ ಭಗತ್ ಸಿಂಗ್ ಇಂಗ್ಲೀಷ್ ಮೀಡಿಯಂ ಸ್ಕೂಲ್‌ನಲ್ಲಿ ಶನಿವಾರ ಹಮ್ಮಿಕೊಳ್ಳಲಾದ Market Day ಕಾರ್ಯಕ್ರಮ ಸಂಭ್ರಮಭರಿತ ವಾತಾವರಣದಲ್ಲಿ ಯಶಸ್ವಿಯಾಗಿ ನೆರವೇರಿತು. ಚಿಕ್ಕಮಕ್ಕಳಿಗೆ ಖರೀದಿ–ಮಾರಾಟದ ಮೂಲ ತತ್ವ, ಹಣದ ಮೌಲ್ಯ ಮತ್ತು ದಿನನಿತ್ಯದ ವಹಿವಾಟು ಹೇಗೆ ನಡೆಯುತ್ತದೆ ಎಂಬುದನ್ನು ನೇರ ಅನುಭವದ ಮೂಲಕ ಕಲಿಸುವ ಉದ್ದೇಶದಿಂದ ಈ ವಿಶೇಷ ಕಾರ್ಯಕ್ರಮವನ್ನು ಶಾಲೆಯು ಆಯೋಜಿಸಿತ್ತು.
ಕಾರ್ಯಕ್ರಮದಲ್ಲಿ ಮಕ್ಕಳ ಕೈಚಳಕದಿಂದ ತಯಾರಾದ ಆಕರ್ಷಕ ವಸ್ತುಗಳು, ಕಿರಾಣಿ ಅಂಗಡಿಯಲ್ಲಿ ಸಿಗುವ ವಿವಿಧ ಸಾಮಗ್ರಿಗಳು, ಮೇಕಪ್ ಕಿಟ್‌ಗಳು, ಎಲ್ಲಾ ಬಗೆಯ ತರಕಾರಿ–ಹಣ್ಣುಗಳು, ಜೋಳ–ಸಜ್ಜೆ–ಗೋದಿ ಸೇರಿದಂತೆ ಅನೇಕ ಧಾನ್ಯಗಳ ಸ್ಟಾಲ್‌ಗಳು ಅತಿಥಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾದವು. ಮಕ್ಕಳು ಸ್ವತಃ ಸ್ಟಾಲ್‌ಗಳನ್ನು ನಿರ್ವಹಿಸಿ, ಬೆಲೆ ನಿಗದಿ ಮಾಡಿ, ಗ್ರಾಹಕರೊಂದಿಗೆ ಮಾತನಾಡಿ ವಸ್ತುಗಳನ್ನು ಮಾರಾಟ ಮಾಡುವಲ್ಲಿ ತೋರಿದ ಆತ್ಮವಿಶ್ವಾಸ ಹಾಗೂ ಸಂವಹನ ಕೌಶಲ್ಯ ಎಲ್ಲರನ್ನೂ ಆಕರ್ಷಿಸಿತು.
ಪೋಷಕರ ಹೆಚ್ಚಿನ ಹಾಜರಾತಿ ಕಾರ್ಯಕ್ರಮಕ್ಕೆ ಮತ್ತಷ್ಟು ರಂಗ ತುಂಬಿತು. “ಇಂತಹ ಚಟುವಟಿಕೆಗಳು ಮಕ್ಕಳಲ್ಲಿ ಆತ್ಮವಿಶ್ವಾಸ, ಸಂವಹನ ಕೌಶಲ್ಯ, ಸರಳ ಲೆಕ್ಕಾಚಾರ ಮತ್ತು ನೈಜ ಜೀವನಕ್ಕೆ ಅಗತ್ಯವಾದ ಸಾಮಾಜಿಕ ಅರಿವು ಬೆಳೆಸಲು ಮಹತ್ವದ ಪಾತ್ರ ವಹಿಸುತ್ತವೆ” ಎಂದು ಪೋಷಕರು ಪ್ರಶಂಸಿಸಿದರು.
ಶಾಲೆಯ ಮುಖ್ಯೋಪಾಧ್ಯಾಯರು ಮಾತನಾಡಿ, “ಮಕ್ಕಳ ಅಂತರ್ನಿಹಿತ ಪ್ರತಿಭೆಯನ್ನು ಹೊರತೆಗೆದು, ಸೃಜನಶೀಲತೆ–ಕರ್ತವ್ಯನಿಷ್ಠೆ–ವ್ಯವಹಾರಿಕ ಜ್ಞಾನಗಳನ್ನು ಒಟ್ಟಾಗಿ ಕಲಿಸುವ ಸಮಗ್ರ ಕಲಿಕಾ ಕಾರ್ಯಗಳು ಮುಂದುವರಿಯಲಿವೆ” ಎಂದು ತಿಳಿಸಿದ್ದಾರೆ.
ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿ ಸಮನ್ವಯದಿಂದ ಕಾರ್ಯಕ್ರಮವನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿ, Market Day ಅನ್ನು ಮಕ್ಕಳಿಗೆ ನೆನಪಿನಲ್ಲಿ ಉಳಿಯುವಂತಹ ಕಲಿಕಾ–ಅನುಭವ ದಿನವನ್ನಾಗಿ ಪರಿವರ್ತಿಸಿದರು.
ವರದಿ : ಲಕ್ಷ್ಮಣ ಮೂಕಿ
Comments
Post a Comment