ಬಳ್ಳಿಗೇರಿ ಶಾಲೆಯ ಬೆಳ್ಳಿ ಸಂಭ್ರಮ: 25ನೇ ವರ್ಷದ ಮಹೋತ್ಸವಕ್ಕೆ ಭವ್ಯ ಸಿದ್ಧತೆ


ಅಥಣಿ, ಏ.07:
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಗಡಿ ಭಾಗದಲ್ಲಿರುವ ಬಳ್ಳಿಗೇರಿ ಗ್ರಾಮದಲ್ಲಿನ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಗದಿಮಡ್ಡಿ ತೋಟವು ಶಿಕ್ಷಣ ಕ್ಷೇತ್ರದಲ್ಲಿ 25 ವರ್ಷಗಳ ಸಾರ್ಥಕ ಪಯಣವನ್ನು ಪೂರ್ಣಗೊಳಿಸಿರುವ ಹಿನ್ನಲೆಯಲ್ಲಿ ಬೆಳ್ಳಿ ಮಹೋತ್ಸವದ ಸಂಭ್ರಮದಲ್ಲಿ ಮುಳುಗಿದೆ.

ಈ ಐತಿಹಾಸಿಕ ಕ್ಷಣವನ್ನು ಸ್ಮರಣೀಯವಾಗಿಸಲು, ದಿ: 09-04-2026 ಗುರುವಾರ ಸಂಜೆ 4-00 ಗಂಟೆಗೆ, ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನದೊಂದಿಗೆ ಭವ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಮಹೋತ್ಸವವು ಕೇವಲ ಆಚರಣೆಯಲ್ಲ, ಶಾಲೆಯ ಬೆಳವಣಿಗೆಗೆ ಕೈಜೋಡಿಸಿದ ಗುರುಗಳು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ಒಗ್ಗಟ್ಟಿನ ಪ್ರತೀಕವಾಗಿದೆ.

ಕಾರ್ಯಕ್ರಮಕ್ಕೆ ಶೇಗುಣಸಿ ವಿರಕ್ತಮಠದ ಡಾ. ಮ ನಿ ಪ್ರ ಡಾ ಮಹಾಂತಪ್ರಭು ಮಹಾಸ್ವಾಮೀಜಿಗಳು ಹಾಗೂ ಜಮಖಂಡಿಯ ಓಲೆಮಠದ ಪರಮಪೂಜ್ಯ ಶ್ರೀ ಆನಂದ ದೇವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ.

ಉದ್ಘಾಟಕರಾಗಿ ವಾ.ಕ.ರ.ಸಾ.ಸಂ. ಹುಬ್ಬಳ್ಳಿ ಅಧ್ಯಕ್ಷರು ಹಾಗೂ ಜನಪ್ರಿಯ ಶಾಸಕರಾದ ಭರಮುಗೌಡ (ರಾಜು) ಕಾಗೆಯವರು ಆಗಮಿಸಲಿದ್ದು, ಮಾಜಿ ಉಪ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ಹಾಗೂ ಅಥಣಿಯ ಜನಪ್ರಿಯ ಶಾಸಕರಾದ ಶ್ರೀ ಲಕ್ಷ್ಮಣ ಸವದಿ ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಶುಭಾರಂಭ ಮಾಡಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾದ ಬಸಯ್ಯ ಹಿರೇಮಠ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಅಥಣಿ ಕ್ಷೇತ್ರದ ಮಾನ್ಯ ಶಿಕ್ಷಣಾಧಿಕಾರಿಗಳಾದ ಶ್ರೀ ಎಂ ಆರ್ ಮುಂಜೆ, ಸಮನ್ವಯಾಧಿಕಾರಿಗಳಾದ ಶ್ರೀ ಜಿ ಎ ಖೋತ, ಅಕ್ಷರ ದಾಸೋಹ ಅಧಿಕಾರಿಗಳಾದ ಎಂ ವಿ ನಾಮದಾರ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಕಾಂತ ಇಮ್ಮಡಿ, ನಿಂಗಪ್ಪ ಖೋಕಲೆ, ಬಾಬುಗೌಡ ಪಾಟೀಲ್, ಚಿಕ್ಕ ಮಕ್ಕಳ ತಜ್ಞರಾದ ಚನ್ನಪ್ಪಾ ಸಂಕ್ರಟ್ಟಿ, ಗ್ರಾ ಪಂ ಸದಸ್ಯರಾದ ಸೋಮನಿಂಗ ಸಂಕ್ರಟ್ಟಿ ಭಾಗವಹಿಸಲಿದ್ದಾರೆ.

ವಿಶೇಷ ಆಮಂತ್ರಿತರಾಗಿ ಗ್ರಾ ಪಂ ಅಭಿವೃದ್ಧಿ ಅಧಿಕಾರಿ ಶ್ರೀಮತಿ ವಿದ್ಯಾ ಸೂರ್ಯವಂಶಿ, ಕ.ರಾ.ಪ್ರಾ.ಶಾ.ಶಿ. ಸಂಘದ ತಾಲೂಕು ಘಟಕದ ಅಧ್ಯಕ್ಷರಾದ ಜಿ ಎಂ ಹಿರೇಮಠ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಮಹಾಂತೇಶ್ ಕುಳ್ಳೋಳ್ಳಿ, ಬಳ್ಳಿಗೇರಿ ವಲಯ ಮಟ್ಟದ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಪ್ರಕಾಶ್ ನಾವಿ ಉಪಸ್ಥಿತರಿರಲಿದ್ದಾರೆ.

ಈ ಬೆಳ್ಳಿ ಮಹೋತ್ಸವವು ಹಳೆ ವಿದ್ಯಾರ್ಥಿಗಳಲ್ಲಿ ನೆನಪುಗಳನ್ನು ಮರುಜೀವಂತಗೊಳಿಸುವುದರ ಜೊತೆಗೆ, ಪ್ರಸ್ತುತ ವಿದ್ಯಾರ್ಥಿಗಳಿಗೆ ಪ್ರೇರಣೆಯ ದೀಪವಾಗಲಿದೆ. ಗ್ರಾಮಸ್ಥರು ಹಾಗೂ ಶಿಕ್ಷಣಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಮಹೋತ್ಸವವನ್ನು ಯಶಸ್ವಿಗೊಳಿಸಬೇಕೆಂದು ಶಾಲಾ ಆಡಳಿತ ಮಂಡಳಿ ಮನವಿ ಮಾಡಿಕೊಂಡಿದೆ.

ವರದಿ: ಲಕ್ಷ್ಮಣ ಮೂಕಿ 8618861316

Comments