ಅಥಣಿ, ಮುಂಗಾರು ಆರಂಭಗೊಂಡಿರುವ ಹಿನ್ನೆಲೆ ಅಥಣಿ ತಾಲೂಕಿನಲ್ಲಿ ಕೆಲವು ರಸಗೊಬ್ಬರ ಹಾಗೂ ಬೀಜ ಮಾರಾಟಗಾರರ ವಿರುದ್ಧ ರೈತರು ಮತ್ತು ರೈತ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳಪೆ ರಸಗೊಬ್ಬರ ಮಾರಾಟ, ಗೋದಾಮಿನಲ್ಲಿ ಸಾಕಷ್ಟು ಸ್ಟಾಕ್ ಇದ್ದರೂ “ರಸಗೊಬ್ಬರ ಖಾಲಿಯಾಗಿದೆ” ಎಂದು ಸುಳ್ಳು ಮಾಹಿತಿ ನೀಡುವುದು, ಹೆಚ್ಚುವರಿ ಹಣ ಪಡೆದು ಬೀಜ ಹಾಗೂ ರಸಗೊಬ್ಬರ ವಿತರಣೆ ಮಾಡುವಂತಹ ಅಕ್ರಮಗಳು ನಡೆಯುತ್ತಿವೆ ಎಂದು ಆರೋಪಿಸಲಾಗಿದೆ.
ಈ ಕುರಿತು ರೈತ ಮುಖಂಡರು ಕೃಷಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಸಂಬಂಧಪಟ್ಟ ಅಂಗಡಿ ಮಾಲೀಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ರೈತರು ಸಂಕಷ್ಟದಲ್ಲಿರುವ ಈ ಸಮಯದಲ್ಲಿ ಕೆಲ ವ್ಯಾಪಾರಿಗಳು ಲಾಭದಾಸೆಯಿಂದ ರೈತರನ್ನು ದೋಚುತ್ತಿರುವುದು ಖಂಡನೀಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೊಂದೆಡೆ ಅರಿಶಿಣ ಬೀಜಗಳ ದರದಲ್ಲಿಯೂ ರಾತ್ರೋರಾತ್ರಿ ಭಾರೀ ಏರಿಕೆ ಕಂಡುಬಂದಿದೆ ಎಂದು ರೈತರು ದೂರಿದ್ದಾರೆ. ಒಂದೇ ಮಳೆಯ ನಂತರ 800 ರೂಪಾಯಿಯಿಂದ 1000 ರೂಪಾಯಿ ತನಕ ದರ ಹೆಚ್ಚಳ ಮಾಡಿರುವುದಾಗಿ ಆರೋಪಿಸಿದ್ದು, ಈ ದರ ಏರಿಕೆಯ ಹಿಂದೆ ದಲ್ಲಾಳಿಗಳ ಕೈವಾಡವಿದೆ ಎಂದು ತಿಳಿಸಿದ್ದಾರೆ.
ಕೃಷಿ ಇಲಾಖೆಯ ಅಧಿಕಾರಿಗಳು ತಕ್ಷಣ ದಾಳಿ ನಡೆಸಿ, ಕಳಪೆ ಗೊಬ್ಬರ ಮಾರಾಟ ಹಾಗೂ ಕೃತಕ ಅಭಾವ ಸೃಷ್ಟಿಸುವವರ ವಿರುದ್ಧ ಕ್ರಮ ಜರುಗಿಸಬೇಕು. ಜೊತೆಗೆ ಬೀಜ ಮತ್ತು ರಸಗೊಬ್ಬರಗಳನ್ನು ಸರ್ಕಾರ ನಿಗದಿಪಡಿಸಿದ ದರದಲ್ಲೇ ರೈತರಿಗೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ರೈತ ಮುಖಂಡರು ಆಗ್ರಹಿಸಿದರು.
ವರದಿ: ಲಕ್ಷ್ಮಣ ಮೂಕಿ;8618861316
UK FAST KANNADA NEWS
Comments
Post a Comment