24 ವರ್ಷ ಸೇನಾ ಸೇವೆ, ಸ್ವ ಗ್ರಾಮದಲ್ಲಿ ವೀರ ಸೈನಿಕನಿಗೆ ಭರ್ಜರಿ ಸ್ವಾಗತ!”

ಮಹಾರಾಷ್ಟ್ರ- ಜತ್ತ: ಗಡಿ ಭಾಗದ ಸಿಂಧೂರ ಲಕ್ಷ್ಮಣನ ವೀರಭೂಮಿಯಾದ ಸಿಂಧೂರ ಗ್ರಾಮದಲ್ಲಿ ಜನಿಸಿದ ಭಾರತೀಯ ಸೇನೆಯ ವೀರಯೋಧ ಶ್ರೀ ಅಶೋಕ ಸಂಗಪ್ಪ ಹಾರೂಗೇರಿ ಅವರು 2001ರಿಂದ 2025ರವರೆಗೆ 24 ವರ್ಷಗಳ ಕಾಲ ಭಾರತೀಯ ಸೇನೆಯ 7 ಬಾಂಬೆ ಸಾಯಪರ್ಸ್ ಘಟಕದಲ್ಲಿ ಸೇವೆ ಸಲ್ಲಿಸಿ, ಸೇನಾ ನಿವೃತ್ತಿ ಹೊಂದಿ ತಾಯ್ನಾಡಿಗೆ ಮರಳಿದರು. ಅವರ ಸೇವೆಯ ಗೌರವಾರ್ಥವಾಗಿ ಸ್ವಗ್ರಾಮ ಸಿಂಧೂರದಲ್ಲಿ ಅದ್ದೂರಿ ಸ್ವಾಗತ ಹಾಗೂ ಸತ್ಕಾರ ಸಮಾರಂಭ ಆಯೋಜಿಸಲಾಯಿತು.
ಭಾರತ ಮಾತೆಯ ಸೇವೆಯಲ್ಲಿ ತಮ್ಮ ಯೌವನವನ್ನೇ ಅರ್ಪಿಸಿದ ಈ ವೀರಯೋಧ ಅವರು ದೇಶದ ವಿವಿಧ ಗಡಿಭಾಗಗಳಲ್ಲಿ ಸೇವೆ ಸಲ್ಲಿಸಿ, ಹಿಮಪರ್ವತಗಳ ಚಳಿಯಿಂದ ರಾಜಸ್ಥಾನದ ಉಷ್ಣ ಮರಳು ಪ್ರದೇಶಗಳವರೆಗೆ ದೇಶದ ಭದ್ರತೆಗಾಗಿ ತಮ್ಮ ತ್ಯಾಗ ಮತ್ತು ಧೈರ್ಯವನ್ನು ಪ್ರದರ್ಶಿಸಿದ್ದಾರೆ. ರಾಷ್ಟ್ರಭದ್ರತಾ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ ಅನುಭವ ಮತ್ತು ಶಿಸ್ತಿನ ಜೀವನದಿಂದ ಅನೇಕರಿಗೆ ಮಾದರಿಯಾಗಿದ್ದಾರೆ.

ಸತ್ಕಾರ ಸಮಾರಂಭವು ಶನಿವಾರ 04-10-2025 ರಂದು ಸಿಂಧೂರ ಗ್ರಾಮದಲ್ಲಿ ಜರುಗಿತು. ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯ ವಹಿಸಿದವರು ಬ್ರಹ್ಮನಿರಂಜನ ಶ್ರೀ ಗುರುಶಾಂತ ಶಿವಾಚಾರ್ಯ ಮಹಾಸ್ವಾಮೀಗಳು, ಶ್ರೀ ಕಾಡಸಿದ್ದೇಶ್ವರ ಸಂಸ್ಥೆ ಮಠ, ಮಂಜರಿ, ತುಬಚ ಕ್ರಾಸ್.
ಕಾರ್ಯಕ್ರಮಕ್ಕೆ ಪೂಜ್ಯ ಶ್ರೀ ಸಿದ್ದರಾಮ ಶಿವಯೋಗಿಗಳು, ಸಿದ್ದಾರೂಡ ಮರ ಶಿವಯೋಗಾಶ್ರಮ, ಮುಧೂಳ ಬೆಳಗಲಿ ಇವರ ನೇತೃತ್ವ ದೊರೆಯಿತು.
ಗ್ರಾಮದ ಶಾಲಾ ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ಮಾಜಿ ಸೈನಿಕರು, ಬುದ್ಧಿಜೀವಿಗಳು, ಸಮಾಜಮುಖಂಡರು ಹಾಗೂ ಗ್ರಾಮಸ್ಥರು ದೊಡ್ಡ ಸಂಖ್ಯೆಯಲ್ಲಿ ಹಾಜರಾಗಿ ತಾಳಮದ್ದಳೆ, ಹಾರ ಹಾಗೂ ಪಟಾಕಿ ಸಿಡಿಸುವ ಮೂಲಕ ಅದ್ದೂರಿಯಾಗಿ ಸ್ವಾಗತ ಕೋರಿದರು. ಮಕ್ಕಳ ಕೈಯಲ್ಲಿ ಹೂಮಾಲೆಗಳು, ಹಾರಗಳ ಮಳೆಯ ನಡುವೆ “ಭಾರತ ಮಾತಾ ಕಿ ಜಯ” ಘೋಷಣೆಗಳು ಮೊಳಗಿದವು.

ಗ್ರಾಮದ ಹಿರಿಯರು ವೀರಯೋಧನ ಪಾದಸ್ಪರ್ಶ ಮಾಡಿ ಆಶೀರ್ವಾದ ಕೋರಿದರು. ಈ ಸಂದರ್ಭದಲ್ಲಿ ವೀರಯೋಧ ಅಶೋಕ ಹಾರೂಗೇರಿ ಮಾತನಾಡಿ, “ನಾನು ಸೇನೆಗೆ ಸೇರಿದ್ದಾಗ ಅದು ಕೇವಲ ಕೆಲಸವಲ್ಲ, ಕರ್ತವ್ಯ ಮತ್ತು ದೇಶಪ್ರೇಮದ ಕರೆಯಿತ್ತು. ನಮ್ಮ ಯುವಕರು ರಾಷ್ಟ್ರಸೇವೆಯ ಮಾರ್ಗವನ್ನು ಆರಿಸಬೇಕು” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಸೈನಿಕರು ಹಾಗೂ ಸಮಾಜಮುಖಂಡರು ಅವರ ತ್ಯಾಗ ಮತ್ತು ಧೈರ್ಯದ ಕುರಿತು ಮಾತನಾಡಿ, ಯುವ ಪೀಳಿಗೆಗೆ ಪ್ರೇರಣಾದಾಯಕ ಸಂದೇಶ ನೀಡಿದರು. ವೀರಯೋಧನಿಗೆ ಸನ್ಮಾನಪತ್ರ, ಹೂಮಾಲೆ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಭಾರತ ಮಾತೆಯ ಸೇವೆ ಮಾಡಿ ತಾಯ್ನಾಡಿಗೆ ಮರಳಿದ ಶ್ರೀ ಅಶೋಕ ಸಂಗಪ್ಪ ಹಾರೂಗೇರಿ ಅವರ ಶೌರ್ಯ, ತ್ಯಾಗ ಹಾಗೂ ದೇಶಪ್ರೇಮ ಸಿಂಧೂರ ಗ್ರಾಮದ ಜನರ ಮನದಲ್ಲಿ ಶಾಶ್ವತ ನೆನಪಾಗಿ ಉಳಿಯಲಿದೆ

Comments