24 ಎಕರೆ ಜಮೀನಿಗಾಗಿ ರಕ್ತದ ಹೊಳೆ! ಗೋವಿಂದಪುರದಲ್ಲಿ ಆಸ್ತಿ ವಿವಾದಕ್ಕೆ ಆರು ಜನರ ಬರ್ಬರ ಹತ್ಯೆ

ವಿಜಯಪುರ, ಮೇ 29: ಜಿಲ್ಲೆಯ ಚಡಚಣ ತಾಲ್ಲೂಕಿನ ಗೋವಿಂದಪುರ ಗ್ರಾಮದಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಭೀಕರ ದಾಳಿಯಲ್ಲಿ ಒಂದೇ ಕುಟುಂಬದ ಐವರು ಸೇರಿದಂತೆ ಒಟ್ಟು ಆರು ಜನರನ್ನು ಮಾರಕಾಸ್ತ್ರಗಳಿಂದ ಕಡಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ.
ಮೃತರನ್ನು ಚಂದು ನಿರಾಳೆ (56), ದುಂಡಪ್ಪ ನಿರಾಳೆ (65), ಶಿವಪುತ್ರ ನಿರಾಳೆ (60), ರಾಹುಲ್ ನಿರಾಳೆ (35), ಸಮರ್ಥ ನಿರಾಳೆ (24) ಹಾಗೂ ಶಬ್ಬೀರ್ ನದಾಫ್ (50) ಎಂದು ಗುರುತಿಸಲಾಗಿದೆ.

ಪೊಲೀಸರು ನೀಡಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ಸುಮಾರು 15 ರಿಂದ 20 ಜನರ ದುಷ್ಕರ್ಮಿಗಳ ಗುಂಪು ಹೊಲದಲ್ಲಿ ಕೆಲಸ ಮಾಡುತ್ತಿದ್ದ ನಿರಾಳೆ ಕುಟುಂಬದವರ ಮೇಲೆ ಏಕಾಏಕಿ ದಾಳಿ ನಡೆಸಿದೆ. ಮೊದಲು ಕಣ್ಣಿಗೆ ಖಾರದ ಪುಡಿ ಎರಚಿದ ದುಷ್ಕರ್ಮಿಗಳು ಬಳಿಕ ಮಾರಕಾಸ್ತ್ರಗಳಿಂದ ಮನಬಂದಂತೆ ಹಲ್ಲೆ ನಡೆಸಿ ಆರು ಜನರನ್ನು ಹತ್ಯೆ ಮಾಡಿದ್ದಾರೆ.

ಮೂಲಗಳ ಪ್ರಕಾರ, ಗೋವಿಂದಪುರ ಗ್ರಾಮದಲ್ಲಿನ 24 ಎಕರೆ ವಿವಾದಿತ ಜಮೀನನ್ನು ನಿರಾಳೆ ಕುಟುಂಬವು ಆರು ತಿಂಗಳ ಹಿಂದೆ ಖರೀದಿಸಿತ್ತು. ಜಮೀನು ಖರೀದಿಸದಂತೆ ಸ್ಥಳೀಯರು ಎಚ್ಚರಿಕೆ ನೀಡಿದ್ದರೂ ಕುಟುಂಬವು ಖರೀದಿಗೆ ಮುಂದಾಗಿತ್ತು ಎನ್ನಲಾಗಿದೆ. ಶುಕ್ರವಾರ ಜಮೀನನ್ನು ಕೃಷಿಗೆ ಸಜ್ಜುಗೊಳಿಸುವ ಕಾರ್ಯ ನಡೆಯುತ್ತಿದ್ದ ವೇಳೆ ಈ ರಕ್ತಪಾತ ನಡೆದಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಮೃತದೇಹಗಳನ್ನು ಚಡಚಣ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಆಸ್ಪತ್ರೆ ಎದುರು ಸಾವಿರಾರು ಜನರು ಜಮಾಯಿಸಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇನ್ನೊಂದೆಡೆ, ಗೋವಿಂದಪುರದ ಬಿಜೆಪಿ ಮುಖಂಡ ಅಪ್ಪುಗೌಡ ಪಾಟೀಲ (ಗೊಳಗಿ) ಹಾಗೂ ಅವರ ಸಹಚರರ ವಿರುದ್ಧ ಮೃತರ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಆದರೆ ಆರೋಪಗಳ ಬಗ್ಗೆ ಇನ್ನೂ ಅಧಿಕೃತ ದೃಢೀಕರಣವಾಗಿಲ್ಲ.

ಪ್ರಕರಣದ ಕುರಿತು ತನಿಖೆ ಮುಂದುವರಿದಿದ್ದು, ಆರೋಪಿಗಳ ಪತ್ತೆ ಹಾಗೂ ಬಂಧನಕ್ಕಾಗಿ ಪೊಲೀಸರು ವ್ಯಾಪಕ ಕಾರ್ಯಾಚರಣೆ ಕೈಗೊಂಡಿದ್ದಾರೆ. ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ ಈ ಘಟನೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Comments