ಬೆಳಗಾವಿ, ಅಥಣಿ: ಅಥಣಿ ತಾಲೂಕಿನ ಗಡಿ ಭಾಗದ ಬಳ್ಳಿಗೇರಿ ಗ್ರಾಮದಲ್ಲಿರುವ ಗದಿಮಡ್ಡಿ ತೋಟದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 25ನೇ ರಜತ ಮಹೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಹಾಗೂ ಭಕ್ತಿಭಾವದಿಂದ ನೆರವೇರಿತು.
ಕಾರ್ಯಕ್ರಮವನ್ನು ಶೇಗುಣಸಿ ವಿರಕ್ತ ಮಠದ ಡಾ. ಮಹಾಂತ ಪ್ರಭು ಶ್ರೀಗಳು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಮಾತೃಭಾಷೆಯಲ್ಲಿ ಶಿಕ್ಷಣ ಪಡೆದಾಗ ಮಕ್ಕಳಲ್ಲಿ ಅರಿವು ವೇಗವಾಗಿ ಬೆಳೆಯುತ್ತದೆ. ಕನ್ನಡ ಭಾಷೆಯ ಮಹತ್ವ ಅಪಾರ. ಸರ್ಕಾರಿ ಶಾಲೆಗಳ ಬೆಳವಣಿಗೆಗೆ ಸರ್ಕಾರ ಕೈಗೊಂಡಿರುವ ಕ್ರಮಗಳಿಗೆ ನಾವು ಬೆಂಬಲ ನೀಡಬೇಕು” ಎಂದು ಅಭಿಪ್ರಾಯಪಟ್ಟರು.
ಒಂದು ಸಣ್ಣ ಗುಡಿಸಿಲಿನಿಂದ ಆರಂಭವಾದ ಈ ಶಾಲೆ ಇಂದಿಗೆ 25 ವರ್ಷಗಳನ್ನು ಪೂರೈಸಿ ಸುಸಜ್ಜಿತ ಕಟ್ಟಡ ಹಾಗೂ ಸುಂದರ ಪರಿಸರದಲ್ಲಿ ಬೆಳೆಯುತ್ತಿರುವುದು ಶ್ಲಾಘನೀಯ ಎಂದು ಅವರು ಹೇಳಿದರು. ಹಳೆಯ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರ ಒಗ್ಗಟ್ಟಿನ ಸಂಭ್ರಮ ಈ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದಿದೆ ಎಂದು ಹೇಳಿದರು.
ಜಮಖಂಡಿ ಓಲೆಮಠದ ಶ್ರೀ ಆನಂದ ದೇವರು ಮಾತನಾಡಿ, “ಸರ್ಕಾರಿ ಶಾಲೆಗಳಲ್ಲಿ ಕಲಿತ ಮಕ್ಕಳಲ್ಲಿ ಆತ್ಮವಿಶ್ವಾಸ ಹಾಗೂ ಧೈರ್ಯ ಹೆಚ್ಚಾಗಿರುತ್ತದೆ. ದಿವಂಗತ ಚಂದ್ರಶೇಖರಯ್ಯ ಹಿರೇಮಠ ಅವರು ಭೂದಾನ ನೀಡುವ ಮೂಲಕ ಈ ಭಾಗದ ಮಕ್ಕಳ ಶಿಕ್ಷಣಕ್ಕೆ ಮಹತ್ವದ ಸೇವೆ ಸಲ್ಲಿಸಿದ್ದಾರೆ” ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಎಂ.ವಿ. ನಾಮದಾರ ಅವರು, “ಈ ಶಾಲೆಯ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನದೇ ಆದ ಗುರಿ ಹೊಂದಿ ಮುಂದೆ ಸಾಗಬೇಕು” ಎಂದು ಸಲಹೆ ನೀಡಿದರು.
ಕ್ಷೇತ್ರ ಸಮೂಹ ಸಂಪನ್ಮೂಲ ವ್ಯಕ್ತಿ ಮಹಾಂತೇಶ್ ಕುಳ್ಳೋಳ್ಳಿ ಅವರು, “ಈ ಶಾಲೆಯಲ್ಲಿ ಮಕ್ಕಳ ದಾಖಲಾತಿ ಮತ್ತು ಹಾಜರಾತಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದು ಉತ್ತಮ ಸೂಚನೆ. ಇಂತಹ ಕಾರ್ಯಕ್ರಮಗಳು ಸರ್ಕಾರಿ ಶಾಲೆಗಳ ಪ್ರಗತಿಗೆ ಮಾದರಿಯಾಗುತ್ತವೆ” ಎಂದರು.
ವಲಯ ಸಮೂಹ ಸಂಪನ್ಮೂಲ ವ್ಯಕ್ತಿ ಪ್ರಕಾಶ್ ನಾವಿ ಅವರು ಮಾತನಾಡಿ, “ಶಿಕ್ಷಕರ ಸಮರ್ಪಿತ ಸೇವೆಯಿಂದಲೇ ಇಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಪ್ರತಿವರ್ಷ ಹಲವು ಮಕ್ಕಳು ಮುರಾರ್ಜಿ ವಸತಿ ಶಾಲೆಗೆ ಆಯ್ಕೆಯಾಗುತ್ತಿರುವುದು ಸಂತಸದ ವಿಚಾರ” ಎಂದು ಹೇಳಿದರು.
ಚಿಕ್ಕ ಮಕ್ಕಳ ತಜ್ಞರಾದ ಡಾ. ಚನ್ನಪ್ಪಾ ಸಂಕ್ರಟ್ಟಿ ಅವರು, “ಶಾಲೆಯಲ್ಲಿ ಶಿಕ್ಷಕರು ಶಿಕ್ಷಣ ನೀಡಿದರೆ, ಮನೆಯಲ್ಲಿ ಪಾಲಕರು ಸಂಸ್ಕಾರ ನೀಡಬೇಕು. ಈ ಎರಡರ ಸಮನ್ವಯದಿಂದ ಉತ್ತಮ ನಾಗರಿಕರು ರೂಪುಗೊಳ್ಳುತ್ತಾರೆ” ಎಂದು ಹೇಳಿದರು.
ಮಾಜಿ ಜಿಪಂ ಸದಸ್ಯ ಚಂದ್ರಕಾಂತ ಇಮ್ಮಡಿ ಅವರು, “ನಮ್ಮ ಗ್ರಾಮಕ್ಕೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಮಂಜೂರಾಗಿದ್ದು, ಈಗ ಒಂದನೇ ತರಗತಿಯಿಂದ 12ನೇ ತರಗತಿವರೆಗೆ ಶಿಕ್ಷಣ ಪಡೆಯುವ ಅವಕಾಶ ಲಭ್ಯವಾಗಲಿದೆ” ಎಂದು ತಿಳಿಸಿದರು.
ಮಾಜಿ ಜಿಪಂ ಸದಸ್ಯ ನಿಂಗಪ್ಪಾ ಖೋಕಲೆ ಅವರು, “ಶಿಕ್ಷಕರು ಮತ್ತು ಪಾಲಕರು ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ಗುಣಮಟ್ಟದ ಶಿಕ್ಷಣ ಸಾಧ್ಯ. ಈ ರಜತ ಮಹೋತ್ಸವ ಕಾರ್ಯಕ್ರಮ ಗ್ರಾಮಕ್ಕೆ ಹೆಮ್ಮೆ ತಂದಿದೆ” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸಯ್ಯ ಹಿರೇಮಠ ವಹಿಸಿದ್ದರು. ವೇದಿಕೆಯಲ್ಲಿ ಸೋಮನಿಂಗ ಸಂಕ್ರಟ್ಟಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪೂಜ್ಯರು, ದಾನಿಗಳು, ಸಾಧಕರು, ನಿವೃತ್ತ ಶಿಕ್ಷಕರು ಹಾಗೂ ಅಡುಗೆ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳಿಂದ ಪ್ರಾರ್ಥನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಶಿಕ್ಷಕರಾದ ರಮೇಶ್ ಗಡ್ಡೆನ್ನವರ ಸ್ವಾಗತಿಸಿದರು, ವಿಶುಕುಮಾರ ಮಾಳಿ ಕಾರ್ಯಕ್ರಮ ನಿರೂಪಿಸಿದರು. ಮುಖ್ಯೋಪಾಧ್ಯಾಯ ವ್ಹಿ.ಎಂ. ಬಡಿಗೇರ್ ಪ್ರಾಸ್ತಾವಿಕವಾಗಿ ಮಾತನಾಡಿ ವಂದಿಸಿದರು.
ಕಾರ್ಯಕ್ರಮಕ್ಕೆ ಭಾರೀ ಸಂಖ್ಯೆಯಲ್ಲಿ ಜನರು ಆಗಮಿಸಿದ್ದು, ಊಟದ ವ್ಯವಸ್ಥೆಯೊಂದಿಗೆ ಸಮಾರಂಭ ಯಶಸ್ವಿಯಾಗಿ ಸಂಪನ್ನಗೊಂಡಿತು.
ವರದಿ : ಲಕ್ಷ್ಮಣ ಮೂಕಿ,8618861316
UK FAST KANNADA NEWS
Comments
Post a Comment