ಅಥಣಿಯಲ್ಲಿ ಮಹಿಳಾ ಶಕ್ತಿಗೆ ವೇದಿಕೆ: ಭರವಸೆ ಬೆಳಕು ಫೌಂಡೇಶನ್‌ನಿಂದ ವಾರ್ಷಿಕೋತ್ಸವ ಹಾಗೂ ಮಹಿಳಾ ದಿನಾಚರಣೆ

ಅಥಣಿ, ಮಾ.26: ಮಹಿಳಾ ಸಬಲೀಕರಣ ಮತ್ತು ಸಮಾಜದಲ್ಲಿ ಅವರ ಪಾತ್ರದ ಮಹತ್ವವನ್ನು ಉತ್ತೇಜಿಸುವ ಉದ್ದೇಶದಿಂದ ಭರವಸೆ ಬೆಳಕು ಫೌಂಡೇಶನ್ ವತಿಯಿಂದ ದ್ವಿತೀಯ ವರ್ಷದ ವಾರ್ಷಿಕೋತ್ಸವ ಹಾಗೂ ವಿಶ್ವ ಮಹಿಳಾ ದಿನಾಚರಣೆಯನ್ನು ಇದೇ ತಿಂಗಳ 31ರಂದು ಭರ್ಜರಿಯಾಗಿ ಆಯೋಜಿಸಲಾಗುತ್ತಿದೆ.

ಈ ಕುರಿತು ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಪದಾಧಿಕಾರಿಗಳು ಕಾರ್ಯಕ್ರಮದ ಕುರಿತು ವಿವರ ನೀಡಿದರು. ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಅಥಣಿಯ ಸುಕ್ಷೇತ್ರ ಶ್ರೀ ಗಚ್ಚಿನ ಮಠದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಮುತ್ತೈದೆಯರಿಗೆ ಉಡಿ ತುಂಬುವ ಸಂಪ್ರದಾಯಿಕ ಕಾರ್ಯಕ್ರಮವೂ ವಿಶೇಷ ಆಕರ್ಷಣೆಯಾಗಲಿದೆ ಎಂದು ತಿಳಿಸಿದರು.

ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯವಾಗಿ ಮ ನೀ ಪ್ರ ಸ್ವಾಮಿಜಿಗಳು ಭಾಗವಹಿಸಲಿದ್ದು, ಉದ್ಘಾಟಕರಾಗಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌದರಿ ಆಗಮಿಸಲಿದ್ದಾರೆ. ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಅಥಣಿ ಕ್ಷೇತ್ರದ ಶಾಸಕರಾದ ಲಕ್ಷ್ಮಣ ಸವದಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಇದೇ ವೇಳೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಮಹಿಳಾ ಸಬಲೀಕರಣದ ಕುರಿತ ಸಂದೇಶವನ್ನು ಜನತೆಗೆ ತಲುಪಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥಾಪಕಿ ಹಾಗೂ ಅಧ್ಯಕ್ಷೆ ರೂಪಾ ಕಾಂಬಳೆ, ಕಾರ್ಯದರ್ಶಿ ಕಾದಂಬರಿ ಅಕ್ಕೋಳ, ಜಿಲ್ಲಾ ಅಧ್ಯಕ್ಷೆ ರಾಣಿ ಮೋಹನ್ ಬಡಿಗೇರ, ಸಮಾಜಸೇವಕಿ ಸವಿತಾ ಕಾಂಬಳೆ, ಸದಸ್ಯೆ ವೈಶಾಲಿ ಮೇಲ್ಗಡೆ, ತಾಲೂಕು ಅಧ್ಯಕ್ಷೆ ಗೀತಾ ಮಡ್ಡಿ ಹಾಗೂ ಡಾ. ಭಾರತಿ ಬಿಜಾಪೂರೆ ಸೇರಿದಂತೆ ಹಲವರು ಹಾಜರಿದ್ದರು.

ಕಾರ್ಯಕ್ರಮದ ಮೂಲಕ ಮಹಿಳೆಯರ ಅಭಿವೃದ್ಧಿ, ಸಾಂಸ್ಕೃತಿಕ ಮೌಲ್ಯಗಳ ಉಳಿವು ಹಾಗೂ ಸಮಾಜದಲ್ಲಿ ಅವರ ಸಕ್ರಿಯ ಪಾತ್ರವನ್ನು ಬಲಪಡಿಸುವುದು ಪ್ರಮುಖ ಗುರಿಯಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಆಯೋಜಕರು ಮನವಿ ಮಾಡಿದ್ದಾರೆ.

Comments