ಸಿಂಧೂರಲ್ಲಿ ಶ್ರೀ ಮಲ್ಲಿಕಾರ್ಜುನ ನೂತನ ದೇವಾಲಯ ಕಳಸಾರೋಹಣ – ಜಗದ್ಗುರುಗಳ ಆಗಮನಕ್ಕೆ ಭಕ್ತರ ಸಜ್ಜು


ಸಿಂಧೂರ : ಗ್ರಾಮದ ಐತಿಹಾಸಿಕ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ನೂತನ ದೇವಾಲಯದ ಕಳಸಾರೋಹಣ ಹಾಗೂ ಮೂರ್ತಿ ಪ್ರತಿಷ್ಠಾಪನೆ ಮಹೋತ್ಸವವು ಫೆಬ್ರವರಿ 05 ಮತ್ತು 06, 2026 ರಂದು ಭಕ್ತಿಭಾವಪೂರ್ಣ ವಾತಾವರಣದಲ್ಲಿ ನಡೆಯಲಿದ್ದು, ಈ ಮಹೋತ್ಸವದ ಅಂಗವಾಗಿ ನಾಳೆ ಸಂಜೆ 4 ಗಂಟೆಗೆ ಶ್ರೀ ಶ್ರೀ ಶ್ರೀ 1008 ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು (ಉಜ್ಜಯಿನಿ ಪೀಠ) ಸಿಂಧೂರಿಗೆ ಆಗಮಿಸಲಿದ್ದಾರೆ.

ಜಗದ್ಗುರುಗಳ ಆಗಮನವನ್ನು ಅದ್ದೂರಿಯಾಗಿ ಸ್ವಾಗತಿಸಲು ಗ್ರಾಮಸ್ಥರು ಭಾರೀ ಸಿದ್ಧತೆಗಳನ್ನು ಕೈಗೊಂಡಿದ್ದಾರೆ. ಸಾವಿರಾರು ಸುಮಂಗಲ ಮಹಿಳೆಯರು ಮಂಗಳ ವಾದ್ಯಗಳ ನಾದದೊಂದಿಗೆ ಪೂರ್ಣಕುಂಭ ಹೊತ್ತು ಸಂಪ್ರದಾಯಬದ್ಧ ಸ್ವಾಗತ ನೀಡಲಿದ್ದಾರೆ. ಕಲಶ, ಕುಂಕುಮ, ಅಕ್ಷತೆ ಮತ್ತು ಹೂವಿನ ಅಲಂಕಾರಗಳ ಮಧ್ಯೆ ವೇದಘೋಷಗಳೊಂದಿಗೆ ಜಗದ್ಗುರುಗಳನ್ನು ಭವ್ಯ ಮೆರವಣಿಗೆಯಲ್ಲಿ ದೇವಾಲಯದವರೆಗೆ ಕರೆತರಲಾಗುತ್ತದೆ. ಈ ಅಪರೂಪದ ಧಾರ್ಮಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾತರರಾಗಿದ್ದಾರೆ.

ಮಹೋತ್ಸವದ ಅಂಗವಾಗಿ ಅನೇಕ ವೈದಿಕ ಹಾಗೂ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದ್ದು, ಗಣಹೋಮ, ವಾಸ್ತುಶಾಂತಿ, ರುದ್ರಹೋಮ, ಮಹಾಪೂಜೆ, ಕಲಶಸ್ಥಾಪನೆ, ಧ್ವಜಾರೋಹಣ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ನೆರವೇರಲಿವೆ. ಮೂರ್ತಿ ಪ್ರತಿಷ್ಠಾಪನೆಯ ಮುನ್ನ ಹಾಗೂ ನಂತರ ವಿಶೇಷ ಅಭಿಷೇಕ, ಅಲಂಕಾರ ಪೂಜೆ ಮತ್ತು ಮಹಾಮಂಗಳಾರತಿ ನಡೆಯಲಿದ್ದು, ದೇವಸ್ಥಾನದಲ್ಲಿ ದಿವ್ಯ ಧಾರ್ಮಿಕ ವಾತಾವರಣ ನಿರ್ಮಾಣವಾಗಲಿದೆ.

ಫೆಬ್ರವರಿ 06ರಂದು ಕಳಸಾರೋಹಣ ಮಹೋತ್ಸವವು ಜಗದ್ಗುರುಗಳ ದಿವ್ಯ ಸಾನ್ನಿಧ್ಯದಲ್ಲಿ ಭಕ್ತಿಭರಿತವಾಗಿ ನೆರವೇರಲಿದ್ದು, ಬಳಿಕ ಭಕ್ತರಿಗೆ ಆಶೀರ್ವಚನ ಹಾಗೂ ಧಾರ್ಮಿಕ ಪ್ರವಚನ ನಡೆಯಲಿದೆ. ಎರಡು ದಿನಗಳ ಕಾಲ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದ್ದು, ಸಾವಿರಾರು ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ.

ಗ್ರಾಮದೆಲ್ಲೆಡೆ ಹಬ್ಬದ ಸಂಭ್ರಮ ಮನೆಮಾಡಿದ್ದು, ದೇವಾಲಯ ಹಾಗೂ ಪ್ರಮುಖ ರಸ್ತೆಗಳನ್ನು ವಿದ್ಯುತ್ ದೀಪಾಲಂಕಾರ ಮತ್ತು ಹೂವಿನ ತೋರಣಗಳಿಂದ ಅಲಂಕರಿಸಲಾಗಿದೆ. ಸ್ಥಳೀಯ ಗ್ರಾಮಸ್ಥರು, ಯುವ ಸಂಘಟನೆಗಳು ಹಾಗೂ ಭಕ್ತವೃಂದದ ಸಹಕಾರದಿಂದ ಈ ಮಹತ್ವದ ಧಾರ್ಮಿಕ ಮಹೋತ್ಸವ ಯಶಸ್ವಿಯಾಗಿ ನಡೆಯಲು ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.

ವರದಿ: ಲಕ್ಷ್ಮಣ ಮೂಕಿ; 
8618861316


Comments