ಅಥಣಿಯಲ್ಲಿ ಮಕ್ಕಳ ಕಲಾ ಹಬ್ಬ — ಭರವಸೆ ಬೆಳಕು ಫೌಂಡೇಶನ್ ಆಯೋಜಿಸಿದ ಫ್ಯಾನ್ಸಿ ಡ್ರೆಸ್ ಮತ್ತು ಚಿತ್ರಕಲೆ ಸ್ಪರ್ಧೆಯಲ್ಲಿ ಪುಟ್ಟ ಪ್ರತಿಭೆಗಳ ಮಿಂಚು!
ಅಥಣಿ: ಭರವಸೆ ಬೆಳಕು ಫೌಂಡೇಶನ್ (ರಿ), ಅಥಣಿ ವತಿಯಿಂದ ಮಕ್ಕಳ ದಿನಾಚರಣೆಯ ಪ್ರಯುಕ್ತ ಭವ್ಯವಾದ ಫ್ಯಾನ್ಸಿ ಡ್ರೆಸ್ ಹಾಗೂ ಚಿತ್ರಕಲೆ ಸ್ಪರ್ಧೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಹಮ್ಮಿಕೊಳ್ಳಲಾದ ಈ ಕಾರ್ಯಕ್ರಮದಲ್ಲಿ ವಿದ್ಯಾವರ್ಧಕ ಶಾಲೆಯ ಪುಟ್ಟ ಮಕ್ಕಳು ಉತ್ಸಾಹಭರಿತರಾಗಿ ಭಾಗವಹಿಸಿ ತಮ್ಮ ವೈವಿಧ್ಯಮಯ ಉಡುಪುಗಳಿಂದ ಎಲ್ಲರ ಮನ ಗೆದ್ದರು. ಕೆಲವರು ರಾಷ್ಟ್ರಪ್ರೇಮಿ ನಾಯಕರ ವೇಷ ತೊಟ್ಟು ದೇಶಾಭಿಮಾನ ತೋರಿಸಿದರೆ, ಕೆಲವರು ವೈದ್ಯ, ಸೈನಿಕ, ಶಿಕ್ಷಕ, ರೈತ ಹಾಗೂ ಪೌರಾಣಿಕ ಪಾತ್ರಗಳಲ್ಲಿ ಕಾಣಿಸಿಕೊಂಡು ವೇದಿಕೆಗೆ ವಿಶೇಷ ಮೆರುಗು ತಂದರು.
ಮಕ್ಕಳ ಕಲಾತ್ಮಕ ಪ್ರತಿಭೆಯನ್ನು ಬೆಳಗುವ ದೃಷ್ಟಿಯಿಂದ ಆಯೋಜಿಸಲಾದ ಚಿತ್ರಕಲಾ ಸ್ಪರ್ಧೆಯಲ್ಲಿ ಮಕ್ಕಳು ತಮ್ಮ ಕಲ್ಪನೆ ಮತ್ತು ಬಣ್ಣಗಳ ಲೋಕವನ್ನು ಜೀವಂತಗೊಳಿಸಿದರು. ಪ್ರಕೃತಿ ಸಂರಕ್ಷಣೆ, ಸ್ವಚ್ಛ ಭಾರತ, ಪರಿಸರ ಪ್ರೇಮ, ಮತ್ತು ಸಾಂಸ್ಕೃತಿಕ ವಿಷಯಾಧಾರಿತ ಚಿತ್ರಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾದವು. ಮಕ್ಕಳ ಕಲಾತ್ಮಕ ಸ್ಪೂರ್ತಿ ಮತ್ತು ಸೃಜನಶೀಲತೆಯನ್ನು ಪ್ರಶಂಸಿಸಿದ ಭರವಸೆ ಬೆಳಕು ಫೌಂಡೇಶನ್ ವತಿಯಿಂದ ವಿಜೇತರಿಗೆ ಪ್ರಶಸ್ತಿಗಳು ಹಾಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷೆಯಾಗಿ ಮಾತನಾಡಿದ ಶ್ರೀಮತಿ ರೂಪಾ ಎನ್. ಕಾಂಬಳೆ, ಭರವಸೆ ಬೆಳಕು ಫೌಂಡೇಶನ್ (ರಿ) ಅಥಣಿ ಅಧ್ಯಕ್ಷರು, ಹೇಳಿದರು — “ಇಂದಿನ ಕಾಲದಲ್ಲಿ ಮಕ್ಕಳ ಕೈಯಲ್ಲಿ ಮೊಬೈಲ್ ನೀಡುವುದು ಸೂಕ್ತವಲ್ಲ. ನಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ, ಶಿಸ್ತಿನ ಜೀವನಶೈಲಿ ಹಾಗೂ ಗುಣಾತ್ಮಕ ಶಿಕ್ಷಣ ನೀಡುವುದು ಪ್ರತಿಯೊಬ್ಬ ಪೋಷಕರ ಕರ್ತವ್ಯ. ಮಕ್ಕಳ ಮನಸ್ಸು ರೂಪುಗೊಳ್ಳುವ ಈ ವಯಸ್ಸಿನಲ್ಲಿ ನಾವು ಅವರಿಗೆ ಸಕಾರಾತ್ಮಕ ವಾತಾವರಣ ಒದಗಿಸಬೇಕು” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮಕ್ಕೆ ಅಧ್ಯಕ್ಷ ಸ್ಥಾನ ವಹಿಸಿದಂತ ಸುರೇಶ ಚಿಕ್ಕಟ್ಟಿ, ಶ್ರೀಮತಿ ಕಾಶಿಬಾಯಿ ಚೆಕಟ್ಟಿ ಶಿಕ್ಷಣ ಸಂಸ್ಥೆ ಅಥಣಿ ಅಧ್ಯಕ್ಷರು.
ಶ್ರೀಮತಿ ಜಯಶ್ರೀ ಭರತ ಕಾಂಬಳೆ, ಅಧ್ಯಕ್ಷರು — ಸಮಾಜ ಸೇವಕಿ ಶ್ರೀಮತಿ ಸವಿತಾ ಕಾಂಬಳೆ ಸಮಾಜ ಸೇವಕಿ, ಶ್ರೀಮತಿ ರಾಜಶ್ರೀ ಮಗರ, ಹಾಗೂ JE ಶಿಕ್ಷಣ ಸಂಸ್ಥೆ ಅಥಣಿ ಪ್ರಾಂಶುಪಾಲರು,ಮಿತೇಶ್ ಪಟ್ಟಣ, ಖ್ಯಾತ ವಕೀಲ ಹಾಗೂ ಸಮಾಜ ಸೇವಕರು, ಶ್ರೀಮತಿ ಕಾದಂಬರಿ ಆರ್. ಅಕ್ಕೋಳ, ಭರವಸೆ ಬೆಳಕು ಫೌಂಡೇಶನ್ (ರಿ) ಅಥಣಿ. ಸಚಿನ್ ಸರ, ಸತೀಶ ಶಿವನೂರ, ದಿಲೀಪ್ ಕಾಂಬಳೆ (ದೈಹಿಕ ಶಿಕ್ಷಕರು) ಶಂಕರ ಶಿಂಗೆ, ಸಹ ಶಿಕ್ಷಕರು ರಮೇಶ್ ಕೆ.ಕೆ., ಅಪ್ಪು ಕಾಂಬಳೆ, ವಿದ್ಯಾವರ್ಧಕ ಶಾಲೆಯ ಶಿಕ್ಷಕರು ಭಾರತಿ ಪೂಜಾರಿ, ಸಾತ್ವಿ ಕುಲಕರ್ಣಿ, ಕವಿತಾ ಬಬಲೇಶ್ವರ, ವೈಶಾಲಿ ಸುಣಗಾರ ಸೇರಿದಂತೆ ಅನೇಕ ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಮಕ್ಕಳ ಉಡುಪು ಮತ್ತು ಚಿತ್ರಕಲೆಯ ಸೃಜನಶೀಲತೆಯನ್ನು ಕಂಡು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು. ಮಕ್ಕಳ ಮುಖದಲ್ಲಿ ಕಾಣಿಸಿಕೊಂಡ ಸಂತೋಷದ ನಗು ಮತ್ತು ಅವರ ಪ್ರತಿಭೆಯ ಕಿರಣಗಳು ಭರವಸೆ ಬೆಳಕು ಫೌಂಡೇಶನ್‌ನ ಉದ್ದೇಶವನ್ನು ಇನ್ನಷ್ಟು ಉಜ್ವಲಗೊಳಿಸಿದವು. ಕಾರ್ಯಕ್ರಮದ ಅಂತ್ಯದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜರುಗಿತು ಹಾಗೂ ಸಕಲ ಮಕ್ಕಳಿಗೂ ಪಾಲ್ಗೊಂಡು ಉತ್ಸಾಹ ತೋರಿದ್ದಕ್ಕಾಗಿ ಅಭಿನಂದನೆ ಸಲ್ಲಿಸಲಾಯಿತು.
ಭರವಸೆ ಬೆಳಕು ಫೌಂಡೇಶನ್ (ರಿ) ಅಥಣಿ ವತಿಯಿಂದ ಇಂತಹ ಮಕ್ಕಳ ಪ್ರತಿಭೆ ಬೆಳೆಸುವ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳು ಮುಂದೆಯೂ ಹಮ್ಮಿಕೊಳ್ಳಲಾಗುವುದೆಂದು ಆಯೋಜಕರು ತಿಳಿಸಿದ್ದಾರೆ.
ವರದಿ : ಲಕ್ಷ್ಮಣ ಮೂಕಿ
Comments
Post a Comment