ಜತ್ತ / ಸಿಂಧೂರ. ಗಡಿಯಲ್ಲಿ ಕಳ್ಳರ ಕೈಚಳಕ ಮತ್ತೊಮ್ಮೆ ಬಯಲಾಗಿದ್ದು ಗಡಿ ಭಾಗದ ಗ್ರಾಮಗಳಲ್ಲಿ ಕಳ್ಳತನ ಪ್ರಕರಣಗಳು ತಲೆದೋರುತ್ತಲೇ ಇವೆ. ಇತ್ತೀಚೆಗೆ ಜತ್ತ ತಾಲೂಕಿನ ಸಿಂಧೂರ ಗ್ರಾಮದಲ್ಲಿ ನಸುಕಿನ ಜಾವ ಸುಮಾರು 2 ಗಂಟೆಯ ಸುಮಾರಿಗೆ ಭದ್ರತೆ ಸಡಿಲವಾಗಿದ್ದನ್ನು ಸದುಪಯೋಗ ಪಡಿಸಿಕೊಂಡ ಕಳ್ಳರು ಸ್ಥಳೀಯ ರೈತ ಶ್ರೀಶೈಲ್ ಚೆನ್ನಪ್ಪ ಮಗದುಮ್ ಅವರ ಮನೆಯಲ್ಲಿ ದಾಳಿ ನಡೆಸಿ ಎಂಟು ತೊಲೆ ಬಂಗಾರ ಹಾಗೂ ಒಂದು ಲಕ್ಷ ರೂಪಾಯಿ ನಗದನ್ನು ದೋಚಿ ಪರಾರಿಯಾಗಿದ್ದಾರೆ. ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದಿಂದ ಸಿಂಧೂರ ಗ್ರಾಮಕ್ಕೆ ಹೋಗುವ ಸೀಮಾ ಮಾರ್ಗದ ಪಕ್ಕದಲ್ಲೇ ಮನೆಯಿರುವುದರಿಂದ ರಾತ್ರಿ 12 ಗಂಟೆಯವರೆಗೂ ಶೇಂಗಾ ಹರಿದು ಮನೆ ಬಾಗಿಲು ತೆರೆದೆಯೇ ನಿದ್ರೆಗೆ ಜಾರಿದ್ದ ಶ್ರೀಶೈಲ್ ಮಗದುಮ್ ಅವರ ಅಜಾಗರೂಕತೆಯನ್ನೇ ಕಳ್ಳರು ಪ್ರಯೋಜನ ಮಾಡಿಕೊಂಡಿದ್ದಾರೆ. ತೆರೆದಿದ್ದ ಬಾಗಿಲು ಮೂಲಕ ಒಳನುಗ್ಗಿದ ಕಳ್ಳರು ಡಿಜರಿ ಒಡೆದು ಆಭರಣ ಮತ್ತು ನಗದನ್ನು ದೋಚಿ ಪರಾರಿಯಾಗಿದ್ದು ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ. ಮಾಹಿತಿ ದೊರಕಿದ ತಕ್ಷಣ ಜತ್ತ ಪೊಲೀಸ್ ಠಾಣೆಯ ಅಧಿಕಾರಿಗಳು, ಬೆರಳಚ್ಚು ತಜ್ಞರು ಹಾಗೂ ಶ್ವಾನ ದಳದ ತಜ್ಞರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.ಈ ಕಳವು ಪ್ರಕರಣದಿಂದ ಗ್ರಾಮದ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು ಕಳ್ಳತನ ಪ್ರಕರಣಗಳು ಸರತಿ ಸರತಿಯಾಗಿ ನಡೆಯುತ್ತಿರುವುದು ಗಡಿ ಪ್ರದೇಶದ ಭದ್ರತೆಯ ಕೊರತೆಯನ್ನು ಬಯಲಿಗೆಳೆದಂತಾಗಿದೆ. ದಿನದ ಹೊತ್ತಿಗೆ ಹೊಲಗಳಲ್ಲಿ ಕೆಲಸ ಮಾಡುತ್ತಿರುವ ಗ್ರಾಮಸ್ಥರು ರಾತ್ರಿ ಹೊತ್ತು ಕಳ್ಳರ ಭೀತಿಯಿಂದ ನಿದ್ದೆ ಬಾರದ ಸ್ಥಿತಿಯಲ್ಲಿದ್ದಾರೆ.
👉ಕಳ್ಳರ ಬಗ್ಗೆ ಎಚ್ಚರಿಕೆ:**ಇತ್ತೀಚಿನ ದಿನಗಳಲ್ಲಿ ಗಡಿ ಭಾಗದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಎಚ್ಚರಿಕೆಯಿಂದ ಇರಬೇಕಾಗಿದೆ. ರಾತ್ರಿ ವೇಳೆ ಮನೆ ಬಾಗಿಲು ಮುಚ್ಚುವುದು, ಡಿಜರಿ ಹಾಗೂ ಅಮೂಲ್ಯ ವಸ್ತುಗಳನ್ನು ಸುರಕ್ಷಿತವಾಗಿ ಇಡುವುದು, ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವುದು ಅತ್ಯಗತ್ಯವಾಗಿದೆ. ಇಲ್ಲವಾದರೆ ಕಳ್ಳರ ಕೈಚಳಕಕ್ಕೆ ಇನ್ನಷ್ಟು ಬಲಿಯಾಗುವ ಭೀತಿ ಹೆಚ್ಚಾಗಿದೆ.
ವರದಿ: ಲಕ್ಷ್ಮಣ ಮೂಕಿ
UK FAST KANNADA NEWS
Comments
Post a Comment