ಅಥಣಿ: ದೇಶಭಕ್ತಿಯ ರಂಗು ತುಂಬಿದ ಬಳ್ಳಿಗೇರಿ – ಶ್ರೀ ಬಸವ ಜ್ಯೋತಿ ವಿದ್ಯಾಸಂಸ್ಥೆಯಲ್ಲಿ 79ನೇ ಭವ್ಯ ಸ್ವಾತಂತ್ರ್ಯೋತ್ಸವ
ಅಥಣಿ, ಬಳ್ಳಿಗೇರಿ: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸುತ್ತಾ, ಬಳ್ಳಿಗೇರಿ ಗ್ರಾಮದ ಶ್ರೀ ಬಸವ ಜ್ಯೋತಿ ಶಿಕ್ಷಣ ಸಂಸ್ಥೆಯಲ್ಲಿ ಇಂದು 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಗೌರವದಿಂದ ಹಾಗೂ ದೇಶಭಕ್ತಿಯ ಉತ್ಸಾಹದಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ, ಧ್ವಜಾರೋಹಣವನ್ನು ಖ್ಯಾತ ಮಕ್ಕಳ ತಜ್ಞರು ಡಾ. ಆನಂದ್ ಮಹಾದೇವ ಗುಂಜಿಗಾವಿ (ಅಥಣಿ) ನೆರವೇರಿಸಿದರು. ಬಳಿಕ ಮಹಾತ್ಮ ಗಾಂಧೀಜಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ, ಅವರ ಆದರ್ಶಗಳು ಮತ್ತು ಹೋರಾಟದ ಕಥೆಯನ್ನು ಸ್ಮರಿಸಲಾಯಿತು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರು ಚಂದ್ರಕಾಂತ ಇಮ್ಮಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ಸಂಸ್ಥೆಯ ಅಧ್ಯಕ್ಷರು ಸುಭಾನಲ್ಲ ಮುಲ್ಲಾ, ಉಪಾಧ್ಯಕ್ಷರು ಪ್ರಭಾಕರ್ ಇಮ್ಮಡಿ, ಅಲಗೌಡ ಪಾಟೀಲ್, ಪರಮೇಶ್ವರ ಸಂಕರಟ್ಟಿ, ಶಾಲೆಯ ಪ್ರಧಾನ ಗುರುಗಳು ಮುರುಗೇಶ್ ಪಾಟೀಲ್, ಶಿಕ್ಷಕರು ಹಾಗೂ ಊರಿನ ಹಿರಿಯರು ಶಿವಾನಂದ್ ಪಾಟೀಲ್, ಅಪ್ಪಾಸಾಬ ಮೂಡಸಿ, ಬಸಪ್ಪ ಮಾಳಿ ಅಬೂಬಕರ್ ಮುಲ್ಲಾ ಮತ್ತಿತರರು ಭಾಗವಹಿಸಿದ್ದರು.
79ನೇ ಸ್ವಾತಂತ್ರ್ಯ ದಿನಾಚರಣೆಯ ಮಹತ್ವ:
1947ರ ಆಗಸ್ಟ್ 15ರಂದು ಭಾರತವು ಬ್ರಿಟಿಷರ ಆಳ್ವಿಕೆಯಿಂದ ಮುಕ್ತವಾಯಿತು. 79 ವರ್ಷಗಳ ಹಿಂದೆ ದೊರೆತ ಈ ಸ್ವಾತಂತ್ರ್ಯವು ಅನೇಕ ಹೋರಾಟಗಳು, ತ್ಯಾಗಗಳು ಮತ್ತು ಬಲಿದಾನಗಳ ಫಲ. ಪ್ರತೀ ವರ್ಷ ಆಗಸ್ಟ್ 15ರಂದು ದೇಶದಾದ್ಯಂತ ಧ್ವಜಾರೋಹಣ, ಸಾಂಸ್ಕೃತಿಕ ಕಾರ್ಯಕ್ರಮಗಳು, ದೇಶಭಕ್ತಿ ಗೀತೆಗಳು, ಹೋರಾಟಗಾರರ ಸ್ಮರಣೆಗಳು ನಡೆಯುತ್ತವೆ.
ಇದು ಕೇವಲ ಹಬ್ಬವಲ್ಲ, ಸ್ವಾತಂತ್ರ್ಯದ ಹೊಣೆಗಾರಿಕೆಯನ್ನು ಅರಿತು, ರಾಷ್ಟ್ರದ ಪ್ರಗತಿಗಾಗಿ ಪ್ರತಿಯೊಬ್ಬರೂ ತಮ್ಮ ಪಾತ್ರವನ್ನು ನಿಭಾಯಿಸಬೇಕೆಂಬ ನೆನಪಿನ ದಿನವೂ ಹೌದು.
ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ದೇಶಭಕ್ತಿ ಗೀತೆಗಳು, ಕವನಗಳು, ಭಾಷಣಗಳು ಹಾಗೂ ಸಾಂಸ್ಕೃತಿಕ ನೃತ್ಯಗಳು ನಡೆದವು. ಅತಿಥಿಗಳು ಮಕ್ಕಳ ಪ್ರದರ್ಶನವನ್ನು ಮೆಚ್ಚಿ, “ನಾವು ಪಡೆದ ಸ್ವಾತಂತ್ರ್ಯ ಅನೇಕ ಬಲಿದಾನಗಳ ಫಲ, ಅದನ್ನು ಕಾಪಾಡುವುದು ಮತ್ತು ದೇಶವನ್ನು ಇನ್ನಷ್ಟು ಶ್ರೇಷ್ಠವಾಗಿಸುವುದು ನಮ್ಮ ಹೊಣೆ” ಎಂದು ಕರೆ ನೀಡಿದರು.
ಕಾರ್ಯಕ್ರಮದ ಕೊನೆಯಲ್ಲಿ ಸಿಹಿ ವಿತರಣೆ ನಡೆಸಿ, ಹರ್ಷೋದ್ಗಾರಗಳ ನಡುವೆ ಸಮಾರಂಭಕ್ಕೆ ತೆರೆ ಬಿದ್ದಿತು.
Comments
Post a Comment