ಅಥಣಿ:ತಾಲ್ಲೂಕಿನ ಕೋಹಳ್ಳಿ ಗ್ರಾಮದ ಎಡಭಾಗದ ರೈತರಿಗೆ ನೀರು ಹರಿಸುವ ಪ್ರಮುಖ ಕಾಲುವೆ, ಕೋಹಳ್ಳಿ–ಸಿಂಧೂರ ರಸ್ತೆ ಅಡ್ಡವಾಗಿ ಹರಿಯುತ್ತದೆ. ಈ ಸ್ಥಳದಲ್ಲಿ ಸಂಚಾರ ಸುಗಮಗೊಳಿಸಲು ಕೆಲವು ವರ್ಷಗಳ ಹಿಂದೆ ಪಕ್ಕಾ ಸೇತುವೆ ನಿರ್ಮಿಸಲಾಗಿತ್ತು.
ಆದರೆ, ಕಳೆದ ಎರಡು ದಿನಗಳಿಂದ ತಾಲ್ಲೂಕಿನಾದ್ಯಂತ ಸುರಿಯುತ್ತಿರುವ ನಿರಂತರ ಧಾರಾಕಾರ ಮಳೆಯಿಂದಾಗಿ ಸೇತುವೆಯ ಮೇಲ್ಚಾವಣಿ ಭಾಗದಲ್ಲಿ ಬಾಯಿ ತೆರೆದಂತ ಗಂಭೀರ ಬಿರುಕು ಉಂಟಾಗಿದೆ. ಇದರಿಂದ ಪ್ರತಿದಿನ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಚಾಲಕರು ಹಾಗೂ ಪಾದಚಾರಿಗಳು ತೀವ್ರ ಆತಂಕಕ್ಕೊಳಗಾಗಿದ್ದಾರೆ.
ಸ್ಥಳೀಯರ ಪ್ರಕಾರ, ಸೇತುವೆಯ ಈ ಹಾನಿಗೊಳಗಾದ ಭಾಗವನ್ನು ತಕ್ಷಣ ಸರಿಪಡಿಸದಿದ್ದರೆ, ಮಳೆ ಮುಂದುವರೆದರೆ ಅದು ಸಂಪೂರ್ಣ ಕುಸಿಯುವ ಅಪಾಯವಿದೆ. ಈ ಕಾರಣದಿಂದಾಗಿ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಳ್ಳುವಷ್ಟೇ ಅಲ್ಲ, ಜನಜೀವನಕ್ಕೂ ತೊಂದರೆ ಉಂಟಾಗುವ ಸಾಧ್ಯತೆ ಇದೆ.
ಗ್ರಾಮಸ್ಥರು ಹಾಗೂ ಪ್ರಯಾಣಿಕರು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ತುರ್ತು ದುರಸ್ತಿ ಕಾರ್ಯ ಆರಂಭಿಸಿದರೆ ಸಂಭವನೀಯ ಅನಾಹುತವನ್ನು ತಪ್ಪಿಸಬಹುದಾಗಿದೆ.
UK FAST KANNADA NEWS
ವರದಿ : ಲಕ್ಷ್ಮಣ ಮೂಕಿ,8618861316
Comments
Post a Comment