ಬೆಳಗಾವಿ:ಜಿಲ್ಲೆಯ ರಾಯಬಾಗ ತಾಲೂಕಿನ ಮೊರಬ ಗ್ರಾಮದಲ್ಲಿ ಮಹಿಳೆಯರ ತೀವ್ರ ಆಕ್ರೋಶಕ್ಕೆ ಗ್ರಾಮ ಪಂಚಾಯಿತಿ ಕಟ್ಟಡವೇ ಬೀಗ ಹಾಕಲ್ಪಟ್ಟಿದೆ. ಗ್ರಾಮದಲ್ಲಿ ಹಲವು ದಿನಗಳಿಂದ ಚರಂಡಿ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಮಾಡದ ಹಿನ್ನೆಲೆಯಲ್ಲಿ, ಜನರ ಕೋಪ ಉಕ್ಕಿಬಂದಿದ್ದು, ವಿಶೇಷವಾಗಿ ಮಹಿಳೆಯರು ತಮ್ಮ ಹಕ್ಕಿಗಾಗಿ ಹೋರಾಟಕ್ಕೆ ಇಳಿದಿದ್ದಾರೆ.
ಮೊರಬ ಗ್ರಾಮದ 2ನೇ ವಾರ್ಡ್ ದುರ್ಗಾದೇವಿ ದೇವಸ್ಥಾನದ ಬಳಿ ಚರಂಡಿ ನೀರು ಸಂಗ್ರಹಗೊಂಡು ಕಸ-ಕೊಳಚೆಯ ದುರ್ಗಂಧ ಪಸರಿಸುತ್ತಿದೆ. ಈ ಕೊಳಚೆ ನೀರು ನೇರವಾಗಿ ಅಂಗನವಾಡಿ ಕೇಂದ್ರಕ್ಕೆ ಹಾಗೂ ಹತ್ತಿರದ ಮನೆಗಳಿಗೆ ನುಗ್ಗಿ ದಿನನಿತ್ಯದ ಜೀವನ ಅಸಾಧ್ಯವಾಗುತ್ತಿದೆ. ಮಕ್ಕಳು, ವೃದ್ಧರು, ಮಹಿಳೆಯರು ಆರೋಗ್ಯದ ಅಪಾಯವನ್ನು ಎದುರಿಸುತ್ತಿದ್ದು, ಈ ಅನಾಹುತವನ್ನು ನೋಡಿಕೊಂಡು ಗ್ರಾಮಸ್ಥರು ತೀವ್ರ ಬೇಸರಗೊಂಡಿದ್ದಾರೆ.
ಗ್ರಾಮ ಪಂಚಾಯಿತಿಯ ನಿರ್ಲಕ್ಷ್ಯದಿಂದ ಬದುಕು ಕಹಿಯಾದ ಮಹಿಳೆಯರು ಕೊನೆಗೆ ಪಂಚಾಯಿತಿ ಕಟ್ಟಡದ ಬಾಗಿಲಿಗೆ ಬೀಗ ಹಾಕಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. "ಮನೆಗೆ ಕೊಳಚೆ ನೀರು ನುಗ್ಗುತ್ತಾ ಕುಳಿತುಕೊಳ್ಳೋದು ಹೇಗೆ ಸಾಧ್ಯ? ಮಕ್ಕಳು ಅನಾರೋಗ್ಯಕ್ಕೆ ಒಳಗಾಗ್ತಿದ್ದಾರೆ, ಯಾರಿಗೂ ಪರಿವಾರವಿಲ್ಲ.. ಪಂಚಾಯಿತಿ ಕ್ರಮ ಕೈಗೊಳ್ಳಲೇಬೇಕು" ಎಂದು ಮಹಿಳೆಯರು ಜೋರಾಗಿ ಕೂಗಿದ್ದಾರೆ.
ಈ ಸಮಸ್ಯೆ ಬಗ್ಗೆ ಹಲವು ಬಾರಿ ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ ಗ್ರಾಮಸ್ಥರು ಮಾಹಿತಿ ನೀಡಿದ್ದರೂ, ಪ್ರತೀ ಬಾರಿ ಕೇವಲ “ಉಢಾಪೆ” ಉತ್ತರ ಮಾತ್ರ ಸಿಕ್ಕಿದೆ. ಪರಿಣಾಮವಾಗಿ ಗ್ರಾಮಸ್ಥರ ನಂಬಿಕೆ ಅಧಿಕಾರಿಗಳ ಮೇಲೆ ಕುಸಿದಿದ್ದು, ಮಹಿಳೆಯರು ನೇರವಾಗಿ ಕ್ರಮ ಕೈಗೊಳ್ಳಬೇಕೆಂದು ನಿರ್ಧರಿಸಿದ್ದಾರೆ.
"ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಂದು ಸಮಸ್ಯೆ ನೋಡಿ ಪರಿಹಾರ ಕಂಡುಕೊಳ್ಳುವವರೆಗೂ ಪಂಚಾಯಿತಿ ಕಟ್ಟಡದ ಬೀಗ ತೆಗೆಯುವುದಿಲ್ಲ" ಎಂಬ ಪಟ್ಟು ಮಹಿಳೆಯರಿಂದ ವ್ಯಕ್ತವಾಗಿದೆ. ಇದರಿಂದ ಗ್ರಾಮದಲ್ಲಿ ಆಡಳಿತ ವ್ಯವಸ್ಥೆಯ ಮೇಲೆ ಜನರ ಅಸಮಾಧಾನ ಹೆಚ್ಚುತ್ತಿರುವುದು ಸ್ಪಷ್ಟವಾಗಿದೆ.
ಅಂಗನವಾಡಿ ಮಕ್ಕಳು ಕೊಳಚೆ ನೀರಿನಲ್ಲಿ ತೊಡಕಾಡುತ್ತಿರುವುದು, ಮನೆಗಳಲ್ಲಿ ದುರ್ವಾಸನೆ ವ್ಯಾಪಿಸಿರುವುದು, ಸಾರ್ವಜನಿಕ ಆರೋಗ್ಯಕ್ಕೆ ಗಂಭೀರ ಹಾನಿ ಉಂಟಾಗಿರುವುದು — ಇವುಗಳೆಲ್ಲಾ ಗ್ರಾಮ ಪಂಚಾಯಿತಿಯ ನಿರ್ಲಕ್ಷ್ಯಕ್ಕೆ ಸಾಕ್ಷಿ. ಮಹಿಳೆಯರ ಹೋರಾಟ ಗ್ರಾಮದಲ್ಲಿ ದೊಡ್ಡ ಚರ್ಚೆಯ ವಿಷಯವಾಗಿ ಪರಿಣಮಿಸಿದೆ.
ಜನರ ಕಷ್ಟಕ್ಕೆ ಸ್ಪಂದಿಸದೆ ಕುಳಿತಿರುವ ಆಡಳಿತದ ವಿರುದ್ಧ ಮೊರಬ ಮಹಿಳೆಯರು ತೋರಿಸಿರುವ ಹೋರಾಟ, ಇನ್ನು ಮುಂದೆ ಗ್ರಾಮೀಣ ಜನಜೀವನದ ಸಮಸ್ಯೆಗಳನ್ನು ಕಡೆಗಣಿಸುವ ಅಧಿಕಾರಿಗಳಿಗೆ ಎಚ್ಚರಿಕೆಯ ಘಂಟೆಯಾಗಿದೆ.
Comments
Post a Comment