ಬೆಳಗಾವಿ: ರಾಜ್ಯದಲ್ಲಿ ಈ ಬಾರಿ ಸರಿಯಾದ ಸಮಯಕ್ಕೆ ಉತ್ತಮ ಮಳೆಯಾದ ಕಾರಣ ರೈತರು ಉತ್ಸಾಹದಿಂದ ಕೃಷಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಭತ್ತ, ಜೋಳ, ಮೆಕ್ಕೆಜೋಳ, ಸಕ್ಕರೆಕಬ್ಬು ಸೇರಿದಂತೆ ಹಲವು ಬೆಳೆಗಳು ಉತ್ತಮವಾಗಿ ಬೆಳೆಯುತ್ತಿರುವ ಹಂತದಲ್ಲೇ, ಅವುಗಳಿಗೆ ಅಗತ್ಯವಾದ ಯೂರಿಯಾ ರಸಗೊಬ್ಬರ ದೊರಕದೇ ರೈತರು ಚಿಂತೆಯಲ್ಲಿ ಮುಳುಗಿದ್ದಾರೆ.
ಗ್ರಾಮದಿಂದ ಪಟ್ಟಣದವರೆಗೆ, ರಸ ಗೊಬ್ಬರ ಅಂಗಡಿಗಳ ಮುಂದೆ ದಿನವೂ ಬೆಳಗ್ಗೆ ಮುಂಜಾನೆದಿಂದಲೇ ರೈತರು ಉದ್ದ ಸಾಲುಗಳಲ್ಲಿ ನಿಂತು ಕಾಯುತ್ತಿದ್ದಾರೆ. ಕೆಲವರು ಗಂಟೆಗಳ ಕಾಲ ಬಿಸಿಲಿನಲ್ಲಿ ನಿಂತು, ಕೆಲವರು ಮಳೆಯಲ್ಲಿ ನೆನೆದು ರಸಗೊಬ್ಬರಕ್ಕಾಗಿ ಕಾದು ಕುಳಿತಿದ್ದಾರೆ.
ಆದರೆ ರೈತರು ಹೇಳುವಂತೆ – ಯೂರಿಯಾ ಕೊಡಲು ಅಂಗಡಿ ಮಾಲೀಕರು “ಜಿಂಕ್ ಸಲ್ಫೇಟ್” ಅಥವಾ “ನ್ಯಾನೋ ಯೂರಿಯಾ” ಕಡ್ಡಾಯವಾಗಿ ಕೊಂಡುಕೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ. ಈ ಬಲವಂತ ಖರೀದಿ ಪದ್ಧತಿ ರೈತರ ಹಣಕಾಸಿನ ಮೇಲೆ ಹೆಚ್ಚುವರಿ ಭಾರ ಹಾಕುತ್ತಿದೆ. “ನಾವು ಕೇಳಿದ್ದು ಯೂರಿಯಾ, ಕೊಡ್ತಿದ್ದಾರೆ ಹೆಚ್ಚುವರಿ ವೆಚ್ಚದ ಜೋಡಿ ಪ್ಯಾಕೇಜ್,” ನೀಡುತ್ತಿದ್ದಾರೆ.
ಹೆಚ್ಚಿನ ವೆಚ್ಚ, ಕಡಿಮೆ ಲಾಭ
ರೈತರು ಹೇಳುವಂತೆ, ಯೂರಿಯಾ ಬೆಲೆ ಸಾಮಾನ್ಯವಾಗಿದ್ದರೂ, ಜೊತೆಗೆ ಕೊಳ್ಳಬೇಕಾದ ಜಿಂಕ್ ಸಲ್ಫೇಟ್ ಮತ್ತು ನ್ಯಾನೋ ಯೂರಿಯಾ ಬೆಲೆ ಸೇರಿ ಮೊತ್ತ ದ್ವಿಗುಣವಾಗುತ್ತಿದೆ. ಈಗಾಗಲೇ ಸಾಲ ತೀರಿಸಲು ಹಗಲು-ರಾತ್ರಿ ಶ್ರಮಿಸುತ್ತಿರುವ ರೈತರಿಗೆ ಇದು ಮತ್ತೊಂದು ಹೊಡೆತವಾಗಿದೆ.
ಕೃಷಿ ಇಲಾಖೆಗೆ ರೈತರ ಎಚ್ಚರಿಕೆ
ಈ ಸಮಸ್ಯೆ ರಾಜ್ಯದ ಹಲವೆಡೆ ಉಲ್ಬಣಗೊಂಡಿದ್ದು, ರೈತ ಸಂಘಟನೆಗಳು ಸರ್ಕಾರವನ್ನು ಎಚ್ಚರಿಸುತ್ತಿವೆ. “ಪ್ರತಿಯೊಂದು ಫರ್ಟಿಲೈಸರ್ ಅಂಗಡಿ ಮುಂದೆ ಬೋರ್ಡ್ ಚಾಟ್ ಅಳವಡಿಸಬೇಕು, ಯೂರಿಯಾ ಜೊತೆಗೆ ಇತರ ರಸಗೊಬ್ಬರಗಳನ್ನು ಬಲವಂತವಾಗಿ ಮಾರಾಟ ಮಾಡುವುದನ್ನು ತಕ್ಷಣ ನಿಲ್ಲಿಸಬೇಕು. ಇಲ್ಲದಿದ್ದರೆ ಹೋರಾಟ ಹಾದಿ ಅನಿವಾರ್ಯ,” ಎಂದು ರೈತ ಸಂಘದ ನಾಯಕರು ಎಚ್ಚರಿಸಿದ್ದಾರೆ.
ಸರ್ಕಾರದ ಮೌನಕ್ಕೆ ಆಕ್ರೋಶ
ಯೂರಿಯಾ ಕೊರತೆಯ ಬಗ್ಗೆ ಈಗಾಗಲೇ ಅನೇಕ ಬಾರಿ ಗಮನ ಸೆಳೆದರೂ, ಸಂಬಂಧಪಟ್ಟ ಇಲಾಖೆ ಮತ್ತು ಸಚಿವರಿಂದ ಸ್ಪಷ್ಟ ಪ್ರತಿಕ್ರಿಯೆ ಬರದೇ ಇರುವುದನ್ನು ರೈತರು ಆಕ್ರೋಶದಿಂದ ನೋಡುತ್ತಿದ್ದಾರೆ. ಮಳೆ ಚೆನ್ನಾಗಿ ಆಗಿದ್ದರೂ, ಬೆಳೆ ಉಳಿಸಿಕೊಳ್ಳಲು ರಸಗೊಬ್ಬರ ಸಿಗದಿದ್ದರೆ ಕೃಷಿ ಹಾನಿ ಅನಿವಾರ್ಯವಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
.
UK FAST KANNADA NEWS
Comments
Post a Comment