ಅಥಣಿ :ಮನೆಗೆ ನುಗ್ಗಿ ಮಕ್ಕಳನ್ನು ಅಪಹರಿಸಿ ಪರಾರಿಯಾಗುತ್ತಿದ್ದ ದುಷ್ಕರ್ಮಿಗಳ ಮೇಲೆ ಅಥಣಿ ಪೊಲೀಸರು ಗುಂಡು ಹಾರಿಸಿ ಇಬ್ಬರೂ ಬಾಲಕರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿರುವ ಘಟನೆ ಅಥಣಿ ತಾಲೂಕಿನ ಮಹಾರಾಷ್ಟ್ರ ಗಡಿಯಲ್ಲಿ ಗುರುವಾರ ನಡೆದಿದೆ. ಪೊಲೀಸರು ಕಾರ್ಯಾಚರಣೆ ನಡೆಸಿ, ಮೂವರನ್ನು ಬಂಧಿಸಿದ್ದಾರೆ.
ಚಿಕ್ಕೋಡಿ ತಾಲೂಕಿನ ರವಿಕಿರಣ ಕಮ್ಲಾಕರ, ಬಿಹಾರದ ಮೂಲದ ಸದ್ಯ ಮುಂಬೈ ನಿವಾಸಿ ಶಾರುಖ ಶೇಖ ಮತ್ತು ಕೊಲ್ಲಾಪುರ ಜಿಲ್ಲೆಯ ಸಂಬಾ ಕಾಂಬಳೆ ಬಂಧಿತ ಆರೋಪಿಗಳು.
ಅಥಣಿಯ ಹುಲಗಬಾಳ ರಸ್ತೆಯ ಸ್ವಾಮಿ ಪ್ಲಾಟ್ ಬಡಾವಣೆಯ ವಿಜಯ ದೇಸಾಯಿ ಎಂಬುವರ ಮನೆಗೆ ನುಗ್ಗಿ ಅವರ 4 ಮತ್ತು 3 ವರ್ಷದ ಮಕ್ಕಳನ್ನು ಅಪಹರಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದರು. ವಿಷಯ ತಿಳಿದು ಕೂಡಲೇ ಕಾರ್ಯಪ್ರವೃತ್ತರಾದ ಅಥಣಿ ಪೊಲೀಸರು ಮೂರು ತಂಡಗಳನ್ನು ರಚಿಸಿ ಕಾರ್ಯಾಚರಣೆಗೆ ಇಳಿದಿದ್ದರು.
ಮಹಾರಾಷ್ಟ್ರ ಗಡಿಯಾದ ಕೋಹಳ್ಳಿ ಸಿಂಧೂರ ಮಾರ್ಗ ಮಧ್ಯದಲ್ಲಿ ಅಪಹರಣಕಾರರನ್ನು ಪೊಲೀಸರು ತಡೆಗಟ್ಟಿದಾಗ ಪೊಲೀಸರು ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾರೆ ಎನ್ನಲಾಗಿದೆ. ಆಗ ಪೊಲೀಸರು ಆತ್ಮರಕ್ಷಣೆಗೆ ಆರೋಪಿಯ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ.
ಬಂಧಿತ ಕೊಲ್ಲಾಪುರ ಜಿಲ್ಲೆ ಹಾತ ಕಣಗಲಾ ಗ್ರಾಮದ ಸಂಬಾ ರಾವಸಾಬ ಕಾಂಬಳೆ ಎಂದು ಗುರುತಿಸಲಾಗಿದ್ದು ಆತನನ್ನು ಅಥಣಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬೆಳಗಾವಿ ಎಸ್ಪಿ ಭೀಮಾಶಂಕರ ಗುಳೇದ ಪತ್ರಿಕೆಗಳಿಗೆ ಮಾಹಿತಿ ನೀಡಿದ್ದಾರೆ. ಕಾರ್ಯಾಚರಣೆಯಲ್ಲಿ ಜಮೀರ ಡಾಂಗೆ ಹಾಗೂ ರಮೇಶ ಹಾದಿಮನಿ ಎಂಬ ಇಬ್ಬರು ಪೊಲೀಸ್ ಸಿಬ್ಬಂದಿ ಸಹ ಗಾಯಗೊಂಡಿದ್ದು, ಅವರನ್ನು ಅಥಣಿ ಸಮುದಾಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ
ವರದಿ: ಲಕ್ಷ್ಮಣ ಮೂಕಿ,
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ ,8618861316
Comments
Post a Comment